ಗೋಬಿ-
ಮಧ್ಯ ಏಷ್ಯಾದ ಮರುಭೂಮಿ ಮತ್ತು ಅರೆಮರುಭೂಮಿ ಪ್ರದೇಶ; ಮಂಗೋಲಿಯನ್ ಪ್ರಸ್ಥಭೂಮಿಯ ಬಹುಭಾಗವನ್ನೊಳಗೊಂಡಿದೆ. ಗೋಬಿ ಪ್ರಪಂಚದ ಅತ್ಯಂತ ದೊಡ್ಡ ಮರುಭೂಮಿಗಳಲ್ಲೊಂದೆಂದು ಪರಿಗಣಿತವಾಗಿದೆ. ದಕ್ಷಿಣದಲ್ಲಿ ನಾನ್‍ಷಾನ್ ಮತ್ತು ಹಳದಿ ನದಿಯ ಪ್ರದೇಶ. ಪಶ್ಚಿಮಕ್ಕೆ ಸಿಂಕಿಯಾಂಗಿನ ಎಲ್ಲೆ. ಉತ್ತರಕ್ಕೆ ಹ್ಯಾಂಗೇ ಪರ್ವತಶ್ರೇಣಿ ಮತ್ತು ಪೂರ್ವಕ್ಕೆ ದೊಡ್ಡದಾದ ಕಿಂಗನ್ ಪರ್ವತಸಾಲು-ಇವುಗಳ ನಡುವೆ, ಮಂಗೋಲಿಯನ್ ಗಣರಾಜ್ಯ, ಚೀನಕ್ಕೆ ಸೇರಿದ ಮಂಗೋಲಿಯನ್ ಸ್ವಯಮಾಡಳಿತ ಪ್ರಾಂತ್ಯ, ಕನ್ಸು ಮತ್ತು ನಿಂಗ್ಸಿಯಾ ಪ್ರಾಂತ್ಯಗಳಲ್ಲಿ ಇದು ಹರಡಿಕೊಂಡಿದೆ. ಓರ್ಡೋಸ್ ಪ್ರಸ್ಥಭೂಮಿಯ ಪಶ್ಚಿಮಕ್ಕಿರುವ ಅಲಷಾನ್ ಮರುಭೂಮಿಯೂ ಇದರ ಭಾಗವೇ. ಪಾಮಿರಿನ ಪೂರ್ವಕ್ಕಿರುವ ಇದೆ ವಿಸ್ತೀರ್ಣ 300-600ಮೈ. ಗಳಷ್ಟು ಅಗಲ ಮತ್ತು 1,000ಕ್ಕೂ ಹೆಚ್ಚು ಮೈಲಿಗಳಷ್ಟು ಉದ್ದ. ಆದರೂ ಗೋಬಿಯ ವಿಸ್ತೀರ್ಣದ ವಿಷಯದಲ್ಲಿ ಒಂದೇ ಅಭಿಪ್ರಾಯವಿಲ್ಲ. ಚೀನೀ ತುರ್ಕಿಸ್ತಾನದಲ್ಲಿರುವ ತಾರಿಂ ಮತ್ತು ಜುಂಗಾರಿಯನ್ ಪಾತ್ರಗಳನ್ನು ಮತ್ತು ಓರ್ಡೋಸ್ ಮರುಭೂಮಿಯನ್ನು ಮಂಗೋಲಿಯನ್ ಗೋಬಿಯಿಂದ ಬೇರೆಯೆಂದೂ ಪರಿಗಣಿಸುತ್ತಾರೆ. ಮಂಗೋಲರಿಗೆ ಗೋಬಿಯೆಂದರೆ ತಾಲ್ ಎಂದು ಅವರು ಕರೆಯುವ, ಸಮತಟ್ಟಾದ, ಉಸುಗಿನಿಂದ ಕೂಡಿರುವ, ಅಲ್ಲಲ್ಲಿ ಹುಲ್ಲು ಬೆಳೆದಿರುವ ಪಾತ್ರಗಳು ಮಾತ್ರ. ಪಾಮಿರಿನ ಪೂರ್ವಕ್ಕೆ ಮತ್ತು ಟಿಬೆಟ್ ಪ್ರಸ್ಥಭೂಮಿಯ ಉತ್ತರಕ್ಕೆ ಇರುವ, ಮೇಲೆ ತಿಳಿಸಿರುವ ಪ್ರದೇಶಗಳಲ್ಲೆಲ್ಲ ಹರಡಿರುವ ಮರುಭೂಮಿ ಮತ್ತು ಅರೆಮರುಭೂಮಿಗಳು ಮಹಾಗೋಬಿ ಅಥವಾ ಗೋಬಿಮರುಭೂಮಿ ಎನಿಸಿಕೊಂಡಿವೆ.

ಈ ಮರುಭೂಮಿ ಪೂರ್ವಕ್ಕೆ 3,000' ಪಶ್ಚಿಮ ಉತ್ತರಗಳಲ್ಲಿ 5,000' ಎತ್ತರವಾಗಿರುವ ಪ್ರಸ್ಥಭೂಮಿಯಾಗಿದ್ದರೂ ಸುತ್ತಲೂ ಹಬ್ಬಿದ ಉನ್ನತ ಪರ್ವತಶ್ರೇಣಿಗಳ ನಡುವೆ ಇದು ತಟ್ಟೆಯಂತಿದೆ. ಈ ವಿಸ್ತಾರ ಪ್ರದೇಶದ ನಡುವೆ ಅಲ್ಲಲ್ಲಿ ವಾಯುವ್ಯದಿಂದ ಆಗ್ನೇಯದ ಕಡೆಗೆ ಹಾದುಹೋಗುವ ಸವಕಲು ಗುಡ್ಡಸಾಲುಗಳೂ ಅಲ್ಲಲ್ಲಿ ಮರಳಿನ ಅಥವಾ ಕಂಕರಿನ ತಗ್ಗಾದ ಸಣ್ಣ ಸಣ್ಣ ಪಾತ್ರಗಳೂ ಹರಡಿಕೊಂಡಿವೆ. ಕೆಲವೆಡೆ ಗೋಡುಭೂಮಿಯಿದ್ದು, ಮಂಗೋಲಿಯದ ಫಾಸಿಲುಗಳ ಪ್ರದೇಶಗಳನ್ನೊಳಗೊಂಡಿರುವುದನ್ನು ನೋಡಿದರೆ ಹಿಂದೊಮ್ಮೆ ಇಲ್ಲಿ ತೇವಾಂಶ ಹೆಚ್ಚಾಗಿತ್ತೆಂದು ಊಹಿಸಬಹುದಾಗಿದೆ. ಇಲ್ಲಿ ದೊರಕಿರುವ ಅವಶೇಷಗಳಿಂದ ಆದಿಶಿಲಾಯುಗದಿಂದ ಲೋಹಯುಗದ ವರೆಗಿನ ಹಲವು ಪ್ರತ್ಯೇಕ ಸಂಸ್ಕøತಿಗಳನ್ನು ಗುರುತಿಸಬಹುದು.

ಚೀನೀಯರು ಗೋಬಿಯನ್ನು ಷಾವೊ (ಮರಳುಗಾಡು) ಎಂದು ಕರೆಯುತ್ತಾರೆ. ಆದರೆ ಇದು ತಪ್ಪು ಕಲ್ಪನೆಯನ್ನುಂಟುಮಾಡುತ್ತದೆ. ಏಕೆಂದರೆ ಗೋಬಿಯಲ್ಲಿ ಬಹು ಸ್ವಲ್ಪಭಾಗ ಮಾತ್ರ ಮರಳು ಅಥವಾ ಮರಳುದಿಣ್ಣೆಗಳಿಂದ ಕೂಡಿದ್ದು; ಹೆಚ್ಚು ಭಾಗದಲ್ಲಿ ಚಪ್ಪಟೆಯಾದ ಬಂಡೆಗಲ್ಲು ಹರಡಿಕೊಂಡಿದೆ. ಹಲವು ಮೈಲಿಗಳಷ್ಟು ದೂರ ಅದರ ಮೇಲೆ ವಾಹನಗಳನ್ನು ಸರಾಗವಾಗಿ ನಡೆಸಬಹುದು.

ಸಹಾರದಂತೆ ಗೋಬಿಯಲ್ಲಿ ಬರಿಯ ಒಣಹವೆಯಿಲ್ಲ. ಇಲ್ಲಿಯ ಹವೆ ಅತಿ ರೇಕದಿಂದ ಕೂಡಿದ್ದು, ತೀಕ್ಷ್ಣವಾದ ಸುಡುಬಿಸಿಲಿನಲ್ಲಿ ಕಾದ ಮರಳನ್ನು ತೂರಿ ಬಿರುಸಾಗಿ ಬೀಸುವ ಚಂಡಮಾರುತದಂತೆಯೇ ಚಳಿಗಾಲದ ಅತಿಶೈತ್ಯದಿಂದ ಕೂಡಿದ ಶೀತಮಾರುತವೂ ಸಾಮಾನ್ಯ. ವರ್ಷದ ಸ್ವಲ್ಪ ಕಾಲ ಮಾತ್ರ ಗೋಚರಿಸುವ ಇಲ್ಲಿಯ ನದಿಗಳು ಹರಿಯುವುದೂ ಸ್ವಲ್ಪ ದೂರ ಮಾತ್ರವೇ. ಈ ನದಿಗಳ ನೀರು ಮರಳಿನಲ್ಲಿ ಇಂಗಿಹೋಗುತ್ತದೆ; ಇಲ್ಲವೆ ಅಲ್ಲಲ್ಲಿ ಸ್ವಲ್ಪ ತಗ್ಗಾಗಿರುವ ಸಾಮಾನ್ಯವಾಗಿ ಒಣಗಿ ನಿಂತಿರುವ, ಉಷ್ಣಸರೋವರಗಳನ್ನು ಸೇರುತ್ತದೆ. ಈ ಮರುಭೂಮಿಯಲ್ಲಿ ಮರಳಿಲ್ಲ. ಆದರೆ ಕೆಲವೆಡೆ ಕುರುಚಲು ಗಿಡಗಳನ್ನು ಕಾಣಬಹುದು. 9,300' ಎತ್ತರದ ಆಲ್ಪಾ ಮತ್ತು ಅಂಥ ಇತರ ಪರ್ವತಗಳಲ್ಲಿ ಅರ್ಧಕ್ಕೂ ಹೆಚ್ಚು ಎತ್ತರದ ವರೆಗೂ ಸ್ಟೆಪ್ ಹುಲ್ಲೂ ಅಲ್ಲಿಂದ ಎತ್ತರಕ್ಕೆ ಪರ್ವತ ಹುಲ್ಲೂ ಬೆಳೆಯುತ್ತದೆ. ಕುರಿಮೇಕೆಗಳು ಇಲ್ಲಿಯ ಮುಖ್ಯ ಸಾಕುಪ್ರಾಣಿಗಳು. ದನಕರುಗಳನ್ನು ಸಾಕುತ್ತಾರೆ. ಕುದುರೆಗಳು ಸೇ.4 ಮಾತ್ರ. ಇವು ಹೆಚ್ಚಾಗಿರುವುದು ತೇವದ ವಾತಾವರಣವಿರುವ ಆಗ್ನೇಯ ಭಾಗದಲ್ಲಿ. ಮರುಭೂಮಿಯ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣ ಮಾಡಲೂ ಸರಕು ಸಾಗಿಸಲೂ ಉಪಯೋಗಿಸುವ ಪ್ರಾಣಿ ಎರಡು ಡುಬ್ಬಗಳ ಒಂಟೆ.

ಇಲ್ಲಿಯ ಬಹುಭಾಗಗಳಲ್ಲಿ ಜನಸಾಂದ್ರತೆ ಅತ್ಯಂತ ವಿರಳ. ಓಯಸಿಸ್‍ಗಳಿರುವೆಡೆಗಳಲ್ಲಿ ಮಾತ್ರ ಜನ ನೆಲೆಸಿದ್ದಾರೆ. ಹುಲ್ಲುಗಾವಲುಗಳಲ್ಲಿ ಅಲೆಮಾರಿ ಜನಾಂಗಗಳು ತಮ್ಮ ಕುರಿಮೇಕೆಗಳ ಮತ್ತು ಹಸುಗಳ ಮಂದೆಯ ಹಿಂದೆ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾರೆ. ಅಲ್ಲಲ್ಲಿ ಬಾವಿಗಳನ್ನು ತೋಡಿ ಹುಲ್ಲುಗಾವಲಿನ ಪ್ರದೇಶವನ್ನು ವಿಸ್ತರಿಸಲಾಗುತ್ತಿದೆ. ಅಲೆಮಾರಿಗಳ ವಾಸಗುಡಾರಗಳಲ್ಲಿ, ಅವರು ಪ್ರಾಣಿಗಳನ್ನು ಸಾಕುವುದರ ಜೊತೆಗೆ ತೊಗಲಿನ ವ್ಯಾಪಾರವನ್ನೂ ಮಾಡುತ್ತಾರೆ. ಸ್ಟೆಪಿಗಳ ಅಂಚುಗಳಲ್ಲಿ ಈಚೆಗೆ ಚೀನೀಯರು ಅಧಿಕಾಧಿಕವಾಗಿ ನೆಲೆಸುತ್ತಿದ್ದಾರೆ. ಅಲ್ಲಿ ಖನಿಜ ಸಿಕ್ಕುವುವು ಇದಕ್ಕೆ ಕಾರಣ. ಗೋಬಿಯ ಪೂರ್ವಭಾಗದಲ್ಲಿ ಪೆಟ್ರೋಲಿಯಂ ದೊರೆಯುತ್ತದೆ.
(ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ